1660-1708. ಸಿಕ್ಖ್ ಪಂಥದ ಗುರು ಪಂಕ್ತಿಯಲ್ಲಿ ಹತ್ತನೆಯವನು; ಹಾಗೆಯೇ ಕಡೆಯ ಗುರು. ಸಿಕ್ಖ್ ಪಂಥದ ನಂಬಿಕೆಯಂತೆ, ಪಂಥದ ಸ್ಥಾಪಕನಾದ ಮೊದಲ ಗುರು ನಾನಕ್, ತನ್ನ ಅನಂತರ ಪಂಥದ ಗುರುವಾಗಿ ಇರಲು ಎರಡನೆಯ ಗುರು ಅಂಗದನನ್ನು ನೇಮಿಸುವಾಗ, ತಾನು ಅವನಲ್ಲಿ ತನ್ನ ಆತ್ಮವನ್ನಿರಿಸಿದ. ಹೀಗೆಯೇ ಈ ಗುರುತ್ವ ಗುರುವಿನಿಂದ ಗುರುವಿಗೆ ಸಾಗಿತು. ಗುರು ಗೋಬಿಂದ ಸಿಂಹ, ತಾನು ದೇಹವನ್ನು ಬಿಡುವ ಮುನ್ನ, ತನ್ನ ಅನಂತರ ಯಾವನೇ ಒಬ್ಬವ್ಯಕ್ತಿ ಗುರುವಾಗಿ ಇರುವುದಿಲ್ಲ, ಗುರುತ್ವ ಗುರುವಾಣಿಯಾದ ಆದಿಗ್ರಂಥದಲ್ಲಿರುತ್ತದೆ ಎಂದೂ ಮುಂದೆ ಪಂಥದ ಜನ ಈ ಪುಜ್ಯಗ್ರಂಥವನ್ನು (ಗ್ರಂಥ್ ಸಾಹೆಬ್) ಗುರುವೆಂದು ಕಾಣಬೇಕು ಎಂದೂ ನಿಯಮಿಸಿದ. ಇದೇ ಗುರು ಆ ಮೊದಲೇ (1705) ಈ ಗ್ರಂಥಕ್ಕೆ ಒಂದು ನಿಷ್ಕೃಷ್ಟ ಆಕಾರವನ್ನು ಕೊಟ್ಟಿದ್ದ.

ಗುರು ಗೋಬಿಂದ ಸಿಂಹ ಪಂಥದ ಒಂಬತ್ತನೆಯ ಗುರುವಾದ ತೇಗ್ (ತೇಜ್) ಬಹದ್ದೂರನ ಕುಮಾರ. ಶಿಷ್ಯರ ಸಲುವಾಗಿ ದೇಶಾಟನ ಮಾಡುತ್ತ ತೇಗ್ ಬಹದ್ದೂರ್ ಬಿಹಾರದಲ್ಲಿನ ಪಾಟ್ನ ನಗರದಲ್ಲಿದ್ದ. ಈತ ಕಾರ್ಯಾಂತರಕ್ಕಾಗಿ ಕಾಮರೂಪಕ್ಕೆ ಹೋಗಿದ್ದಾಗ ಈ ಕುಮಾರ ಹುಟ್ಟಿದ. ತಾನು ಹೊರಡುವ ವೇಳೆ ಪ್ರಸವದ ನಿರೀಕ್ಷೆಯಲ್ಲಿದ್ದ ಪತ್ನಿಗೆ ತೇಗ್ ಬಹದ್ದೂರ್, ಹುಟ್ಟುವ ಮಗನಿಗೆ ಗೋವಿಂದರಾಯ್ ಎಂದು ಹೆಸರಿಡಲು ಹೇಳಿ ಹೋದ. ಗೋವಿಂದ ತೇಜಸ್ವಿಯಾದ ಬಾಲಕ, ವ್ಯಾಯಾಮ ಪ್ರೇಮಿಯಾಗಿ ಬೆಳೆದ. ಔರಂಗಜ಼ೇಬ್ ಹಿಂದೂ ಗಳನ್ನು ಜಾತಿ ಕೆಡಿಸುತ್ತಿದ್ದಾನೆಂದು ಕಾಶ್ಮೀರದ ಬ್ರಾಹ್ಮಣರು ತೇಗ್ ಬಹದ್ದೂರನ ರಕ್ಷಣೆಯನ್ನು ಬೇಡಿ ಬಂದರು. ಗುರು ಈ ಸಂದರ್ಭದಲ್ಲಿ ಏನು ಮಾಡುವುದು ಎಂದು ಯೋಚಿಸುತ್ತ ಇದ್ದನಂತೆ. ಮಗ ಚಿಂತೆಯೇನು-ಎಂದು ಕೇಳಿದ. ತಂದೆ, ಕೆಲಸಕ್ಕೆ ಧೀರ, ಸತ್ಯವಂತ ಆದ ಸತ್ಪುರುಷಬೇಕು, ಎಂದನಂತೆ. ಕುಮಾರ ಗೋಬಿಂದ, ನಿಮ್ಮಂಥ ಧೀರ ಸತ್ಯವಂತ ಸತ್ಪುರುಷ ಬೇರೆ ಯಾರಪ್ಪ -ಎಂದನಂತೆ. ತೇಗ್ ಬಹದ್ದೂರ್ ಇದು ದೈವದವಾಣಿ ಎಂದು ನೆನೆದ; ದೆಹಲಿಗೆ ಹೋಗಿ ಔರಂಗಜ಼ೇಬನಿಗೆ ಅವನು ಮಾಡುತ್ತಿದ್ದ ಅಕೃತ್ಯಗಳನ್ನು ನಿಲ್ಲಿಸಬೇಕು ಎಂದು ಸೂಚಿಸಿದ. ಔರಂಗಜ಼ೇಬ್ ಅವನನ್ನು ಕೊಲ್ಲಿಸಿದ. ಹದಿನೈದು ವಯಸ್ಸಿನ ಬಾಲಕ ಗೋಬಿಂದ ಗುರುವಾಗಬೇಕಾಯಿತು. ಹಗೆಯೊಂದಿಗೆ ಹೋರದೆ ಬದುಕುವಂತಿಲ್ಲ ಎಂದು ನಿಶ್ಚಯಿಸಿಕೊಂಡ ಗುರು ಗೋಬಿಂದ ಸಿಂಹ ಸಿಕ್ಖ್ ಜನವನ್ನು ಒಂದು ಕ್ಷತ್ರಿಯ ಸಮುದಾಯವಾಗಿ ರೂಪಿಸಲು ನಿರ್ಣಯಿಸಿದ. ತನ್ನ ಶಿಷ್ಯರು ಖಾಲ್ಸಾ ಎಂಬ ಹೆಸರಿಂದ ಒಂದು ಯೋಧಸಮಾಜವಾಗಿ ಬಾಳಬೇಕು ಎಂದು 1669ರ ಯುಗಾದಿಯ ದಿನ ಆಜ್ಞೆ ಮಾಡಿ ಮೊದಲು ಹತ್ತು ಜನರಿಗೆ ಅಂದೇ ದೀಕ್ಷೆ ಕೊಟ್ಟ. ಖಾಲ್ಸಾ ಎಂದರೆ ಶುದ್ಧ. ಖಾಲ್ಸಾ ಮಂದಿ ಶುದ್ಧಜೀವನ ನಡೆಸಬೇಕು ಎಂದೂ ಸಿಕ್ಖ್ ಆದವನಿಗೆ ಕೇಶ, ಕಂಘ, ಕಚ್ಛ, ಕರ, ಕೃಪಾಣ ಎಂಬ ಪಂಚ ಕಕಾರರಕ್ಷಣ ಇರಬೇಕು ಎಂದೂ ನೇಮ ಹಾಕಿಕೊಟ್ಟ. ಶಿಷ್ಯರು ಸಿಂಹ ಎಂದು ಕರೆದುಕೊಳ್ಳಬೇಕು ಎಂದೂ ನಿಯಮಿಸಿದ. ಮೊದಲು ಐವರು ಶಿಷ್ಯರಿಂದ ತಾನೂ ದೀಕ್ಷೆ ತೆಗೆದುಕೊಂಡು ತಾನು ಅಂದಿನಿಂದ ಗೋಬಿಂದ ಸಿಂಹ ಆದ.

ಚಕ್ರವರ್ತಿ ಔರಂಗಜ಼ೇಬನಿಗೆ ಅವನ ಮತದ್ವೇಷವನ್ನು ಖಂಡಿಸಿ ಗೋಬಿಂದ ಒಂದು ಪತ್ರಬರೆದ. ಇದು ಜಫರ್ ನಾಮಾ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು. ಆಯುಷ್ಯವೆಲ್ಲ ಧರ್ಮರಕ್ಷಣೆಗಾಗಿ ಕಾದಿ ಗೋಬಿಂದ ಸಿಂಹ 1708ರಲ್ಲಿ ಇಹಲೋಕವನ್ನು ತೊರೆದ. ಕಾದಾಟದಲ್ಲಿ ಇವನ ಮಕ್ಕಳಲ್ಲಿ ಇಬ್ಬರು ಯುದ್ಧದಲ್ಲಿ ಮಡಿದರು, ಇಬ್ಬರು ಹಗೆಯ ಕೈಗೆ ಸಿಕ್ಕಿ ಬಲಿಯಾದರು. ಇಷ್ಟಾದರೂ ಈ ಧರ್ಮಸಿಂಹ ಧೈರ್ಯಗೆಡಲಿಲ್ಲ; ಬಂದ ದುಃಖಕ್ಕೆ ತಲೆಕೊಟ್ಟು ಶಿಷ್ಯರಿಗೆ ಮೇಲ್ಪಂಕ್ತಿಯಾಗಿ ಬಾಳಿದ.

ಹಿಂದಿನ ಗುರುಗಳ ಕೃತಿಗಳನ್ನೆಲ್ಲ ಸಂಗ್ರಹಿಸಿ ಪರಿಷ್ಕರಿಸಿ ಅವಕ್ಕೆ ಒಂದು ಸ್ಥಿರವಾದ ರೂಪವನ್ನು ಕೊಟ್ಟದ್ದು ಗುರು ಗೋಬಿಂದ ಸಿಂಹ ಮಾಡಿದ ಮಹತ್ಕಾರ್ಯಗಳಲ್ಲಿ ಒಂದು. ಗೋಬಿಂದ ಸಿಂಹ ತಾನೂ ಕೃತಿಗಳನ್ನು ರಚಿಸಿದ. ಆದರೆ ಅದನ್ನು ಗ್ರಂಥ್ ಸಾಹೆಬ್ನಲ್ಲಿ ಸೇರಿಸಲಿಲ್ಲ. ಈತ ತೀರಿದ ಅನಂತರ ಶಿಷ್ಯನೊಬ್ಬ ಆ ಕೃತಿಗಳನ್ನು ಸಂಗ್ರಹಿಸಿದ. ಅದು ದಶಮಗ್ರಂಥ ಎಂದರೆ ಹತ್ತನೆಯ ಗುರುವಿನ ಗ್ರಂಥ ಎಂಬ ಹೆಸರಿನಿಂದ ಬಳಕೆಗೆ ಬಂತು. ಇದರಲ್ಲಿ ಗೋಬಿಂದ ಸಿಂಹನ ಸುಮಾರು 2000ದಷ್ಟು ಕೃತಿಗಳು ಇವೆ. ಗುರು ನಾನಕ್ ಆರಂಭಿಸಿದ ಪಂಥ ಕೆಲವು ಕಾಲದಲ್ಲಿ ಒಂದು ಪ್ರತ್ಯೇಕ ಪಂಥ ಎಂದಾಗಿ ಗುರುಗೋಬಿಂದಸಿಂಹನ ಕಾರ್ಯದಿಂದ ಒಂದು ನಿಷ್ಕೃಷ್ಟ ರೂಪವನ್ನು ತಳೆಯಿತು; ತನ್ನದೇ ಧರ್ಮಗ್ರಂಥವನ್ನು ಪಡೆಯಿತು; ಧರ್ಮರಕ್ಷಣೆಯ ದೀಕ್ಷೆಯನ್ನು ವಹಿಸಿಕೊಂಡಿತು; ಭರತವರ್ಷದ ಇತಿಹಾಸದಲ್ಲಿ ಒಂದು ವಿಶಿಷ್ಟ ಸೇವೆಯನ್ನು ಸಲ್ಲಿಸಲು ಕ್ಷಮವಾದ ಒಂದು ದಕ್ಷ ಧರ್ಮಸಂಘ ಆಯಿತು. 	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ